ಜೋಬ್ 2 

ಬೈಬಲಿನಲ್ಲಿನ ಒಂದು ಮುಖ್ಯ ಕಥಾನಕದ ನಾಯಕ. ಇವನನ್ನು ಕುರಿತು ಆ ಗ್ರಂಥಭಾಗ ಆಧ್ಯಾತ್ಮಕ ದೃಷ್ಟಿಯಿಂದಲೂ ಕಾವ್ಯತೆಯ ದೃಷ್ಟಿಯಿಂದಲೂ ಗಮನಾರ್ಹವಾದುದಾಗಿದೆ. ಬಹಳ ಆಚಾರವಂತನು ಧರ್ಮಿಷ್ಠನು ಆದ ವ್ಯಕ್ತಿಯೊಬ್ಬನಿಗೆ ನಿಷ್ಕಾರಣವಾಗಿ ಅತೀವ ಕಷ್ಟಕಾರ್ಪಣ್ಯಗಳು ಒದಗಿದಾಗ ಆತನ ಮನಸ್ಸಿನಲ್ಲುಂಟಾದ ಒಳತೋಟಿಯನ್ನು ಚಿತ್ರಿಸುವುದೇ ಈ ಕಥೆಯ ಮುಖ್ಯೋದ್ದೇಶ.

	ಜೋಬ್ ಬಹು ನಿಷ್ಠಾವಂತ. ಇವನ ಬಗ್ಗೆ ಸ್ವರ್ಗದಲ್ಲಿ ಮಾತು ಬಂದಾಗ ಇವರ ಪ್ರತಿಕಕ್ಷಿಗಳು 'ಜೋಬ್ ಐಶ್ವರ್ಯವಂತನಾಗಿರುವುದರಿಂದಲೇ ಆಚಾರ ಶೀಲನಾಗಿದ್ದಾನೆ.' ಎಂದು ಕುಟೀಕೆ ಮಾಡುತ್ತಾರೆ. ಇದನ್ನು ಸುಳ್ಳಾಗಿಸಲು ದೇವರು ಜೋಬನ ಆಸ್ತಿಪಾಸ್ತಿಗಳನ್ನು ಮಕ್ಕಳನ್ನು ಆರೋಗ್ಯವನ್ನು ಕೆಡಿಸುತ್ತಾನೆ. ಜೋಬನಾದರೋ ಅದೆಲ್ಲವನ್ನೂ ಬಹು ತಾಳ್ಮೆಯಿಂದ ಸಹಿಸಿಕೊಳ್ಳುತ್ತಾನೆ. ಅವನ ಸ್ಥಿತಿಯನ್ನು ನೋಡಿದ ಜನ ಮರುಗುತ್ತಾರೆ. ಪಾಪ ಮಾಡಿದುದರಿಂದಲೇ ಅವನಿಗೆ ಆ ಪರಿಸ್ಥಿತಿ ಬಂದಿದೆ ಎಂದು ಅವನ ಸ್ನೇಹಿತರು ಅನ್ನುತ್ತಾರೆ. ಆದರೆ ಆ ಮಾತನ್ನು ಜೋಬ್ ತೀವ್ರವಾಗಿ ಖಂಡಿಸುತ್ತಾನೆ. ಅವರಾದರೋ ಮತ್ತೆ ಮತ್ತೆ ಅದೇ ಮಾತುಗಳನ್ನಾಡುತ್ತಾರೆ. ಕ್ರಮೇಣ ಜೋಬನ ಸ್ಥೈರ್ಯ ಕಲಕುತ್ತದೆ. ದೇವರ ದಾರಿಯನ್ನು ಕಂಡು ಅವನು; ಅಚ್ಚರಿಗೊಳ್ಳುತ್ತಾನೆ. ದೇವರು ನ್ಯಾಯವಾದುದನ್ನೇ ಮಾಡುತ್ತಾನೆ ಎಂಬ ವಿಷಯದಲ್ಲಿ ಅವನಿಗಿದ್ದ ಶ್ರದ್ಧೆ ಕಡಿಮೆಯಾಗುತ್ತದೆ. ಆದರೂ ಅವನು ಗೆಳೆಯರ ಮಾತಿಗೆ ಬೆಲೆ ಕೊಡದೆ ಮತ್ತೆ ಮತ್ತೆ ದೇವರನ್ನೇ ಮೊರೆಹೋಗುತ್ತಾನೆ-ಕಷ್ಟನಷ್ಟಗಳನ್ನು ಕೊಟ್ಟ ಆತನೇ ತನ್ನನ್ನು ಅವುಗಳಿಂದ ಪಾರುಮಾಡಿಯಾನು ಎಂಬ ಆಸೆಯಿಂದ. ಈ ಮಧ್ಯೆ ಶ್ರೀದೇವರು ಬಿರುಗಾಳಿಯ ರೂಪದಲ್ಲಿ ಬಂದು ಘನಗಂಭೀರ ಕಂಠದಿಂದ ಜೋಬನಿಗೆ ಸೃಷ್ಟಿಕರ್ತನ ಕಾರ್ಯವೈಚಿತ್ರ್ಯವನ್ನು ವರ್ಣಿಸುತ್ತಾನೆ. ಅದನ್ನು ಕೇಳುತ್ತಿದ್ದಂತೆ ಜೋಬನಿಗೆ e್ಞÁನೋದಯವಾಗುತ್ತದೆ. ದೇವರ ನ್ಯಾಯನಿರ್ಣಯದ ಬಗ್ಗೆ ತಾನು ಶಂಕಿಸಿ ನುಡಿದದ್ದು ತನ್ನ ಕೇವಲ ಅe್ಞÁನದಿಂದ ಎಂದು ಅವನು ಒಪ್ಪುತ್ತಾನೆ. ಆಗ ದೇವರು ಅವನ ಸ್ನೇಹಿತರು ಆಡಿದ ಮಾತುಗಳನ್ನು ಅಲ್ಲಗಳೆದು, ಜೋಬ್ ತನ್ನ ಬಗ್ಗೆ ಹೊಂದಿದ್ದ ಆಭಿಪ್ರಾಯ ಸರಿಯಾದುದೆಂದು ಹೇಳಿ ಜೋಬನಿಗಾದ ನಷ್ಟಗಳನ್ನೆಲ್ಲ ತುಂಬಿಕೊಡುತ್ತಾನೆ.	

	ಈ ಕಥೆ ಹರಿಶ್ಚಂದ್ರರೋಪಾಖ್ಯಾನವನ್ನು ನೆನಪಿಗೆ ತರುತ್ತದೆ.				(ಇ.ಎನ್.ಎಸ್.ಜೆ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ